Dec 23: "ಮಹೋನ್ನತದಲ್ಲಿ ದೇವರಿಗೆ ಮಹಿಮೆ
ಭೂಲೋಕದಲ್ಲಿ ಸುಮನುಜರಿಗೆ ಶಾಂತಿ"
ದಿನಾಂಕ 23.12.2016 ರಂದು ಬೆಳಿಗ್ಗೆ 10.30 ರಿಂದ ಕ್ರಿಸ್ತಜಯಂತಿ ಕಾರ್ಯಕ್ರಮವನ್ನು ಲೊಯೊಲಾ ಪ್ರೌಢಶಾಲೆ ಗಾಡೇನಹಳ್ಳಿ, ಹಾಸನ, ಇಲ್ಲಿ ಹಮ್ಮಿಕೊಳ್ಳಲಾಗಿತ್ತು. ಯೇಸುಕ್ರಿಸ್ತರ ಜನನವನ್ನು ಸಾರುವ ಸುಂದರವಾದ ಗೋದಲಿಯ ಹಿನ್ನೆಲೆಯುಳ್ಳ ರಂಗಸಜ್ಜಿಕೆಯಲ್ಲಿ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಭಗಿನಿ. ಲಿಡ್ವಿನ್ ರವರು ಮಕ್ಕಳ ಸಹಕಾರದೊಂದಿಗೆ ಭಕ್ತಿಪೂರ್ವಕ ಪ್ರಾರ್ಥನೆಯನ್ನು ನಡೆಸಿಕೊಟ್ಟರು. ಯೇಸುಕ್ರಿಸ್ತರ ಜನನವನ್ನು ಸಾರುವ ನೃತ್ಯರೂಪಕವನ್ನು ವಿದ್ಯಾರ್ಥಿಗಳು ಅಭಿನಯಿಸಿದರು. ದುರ್ನಡತೆಗಳು ಮತ್ತು ಸದ್ಗುಣಗಳು ನಾಣ್ಯದ ಎರಡು ಮುಖಗಳಿದ್ದಂತೆ, ದುರ್ಗುಣಗಳನ್ನು ದೇವರ ಆರಾಧನೆ, ಶೃದ್ಧೆ, ಭಕ್ತಿಯಿಂದ ಸದ್ಗುಣಗಳನ್ನಾಗಿ ಮನುಜರು ಹೇಗೆ ಪರಿವರ್ತಿಸಿಕೊಳ್ಳಬಹುದೆಂದು ಪ್ರಸ್ತುತ ಪಡಿಸಿದರು. ಜಾನಪದ ನೃತ್ಯಗಳು, ಸಮೂಹ ನೃತ್ಯ, ಗಾಯನಗಳು ಮನಸೂರೆಗೊಂಡವು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸ್ಥಳೀಯ ಸಂತ ಇಗ್ನೇಷಿಯಸ್ ದೇವಾಲಯದ ಬ್ರದರ್. ಆದರ್ಶ್ ರವರು ಕ್ರಿಸ್ತಜಯಂತಿಯ ಸಂದೇಶ ನೀಡಿದರು. ಪಾರಿವಾಳಗಳ ದೃಷ್ಟಾಂತ ಕಥೆಯ ಮೂಲಕ ಶಾಂತಿಯ ಮಹತ್ವ ತಿಳಿಸಿದರು. ಶಾಂತಿ, ಪ್ರೀತಿ, ಮತ್ತು ಜ್ಯೋತಿಯ ಮೂಲಕ ನಮ್ಮ ಬಾಳು ಬೆಳಗಬೇಕೆಂದು ಆಶಿಸಿದರು. ಕ್ರಿಸ್ತಜಯಂತಿ ಹಬ್ಬದ ಕಾರ್ಯಕ್ರಮ ತಯಾರಿಯಲ್ಲಿ ಪಾಲ್ಗೊಂಡ ಎಲ್ಲಾ ಶಿಕ್ಷಕರಿಗೂ ಮತ್ತು ವಿದ್ಯಾರ್ಥಿಗಳಿಗೆ ಮುಖ್ಯ ಶಿಕ್ಷಕಿ ಭಗಿನಿ. ಸಿಂಥಿಯಾ. ಪಿ. ಡೆಸಾ ರವರು ಕೃತಜ್ಞತೆ ಸಲ್ಲಿಸಿದರು.
ವರದಿ :- ಶಿವನಾರಾಯಣ್ ಭಟ್.ಡಿ,
ಗಣಿತ ಶಿಕ್ಷಕರು, ಲೊಯೊಲಾ ಪ್ರೌಢಶಾಲೆ, ಗಾಡೇನಹಳ್ಳಿ.