Mar 28: ಕಥೋಲಿಕ್ ಶಿಕ್ಷಣ ಮಂಡಳಿಯಲ್ಲಿ 1976 ಸಪ್ಟೆಂಬರ್ ನಲ್ಲಿ ಸೇವೆಗೆ ಸೇರಿ ಬಳಿಕ ಬೆಥನಿ ವಿದ್ಯಾ ಸಂಸ್ಥೆಯ ರೋಸಾ ಮಿಸ್ತಿಕಾ ಹಿ.ಪ್ರಾ.ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ 41 ವರುಷಗಳ ಅಮೂಲ್ಯ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ ಶ್ರೀಮತಿ ಲೂಸಿಯಾ ಬರ್ಬೋಜಾರವರಿಗೆ ಸನ್ಮಾನ ವಿದಾಯ ಸಮಾರಂಭವನ್ನು ದಿನಾಂಕ 28-03-2017ರಂದು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷರಾಗಿದ್ದ ಬೆಥನಿ ಮಂಗಳೂರು ಪ್ರಾಂತ್ಯದ ಸಹ ಪ್ರಾಂತ್ಯಾಧಿಕಾರಿಣಿ ವಂ. ಸಿ ರೋಶಲ್ ಇವರು ಲೂಸಿ ಎಂಬ ಪದದ ಅರ್ಥ ಬೆಳಕು. ತಮ್ಮ ಹೆಸರಿನ ಅರ್ಥದಂತೆ ಶಿಕ್ಷಕಿಯು ವಿದ್ಯಾರ್ಥಿಗಳಿಗೆ ಜ್ಞಾನದ ಬೆಳಕಿನ ಜೊತೆಗೆ, ಸಮಾಜದ ದೀನದಲಿತರಿಗೆ ದಾನದ ಬೆಳಕನ್ನು ನೀಡಿ ತಮ್ಮ ವೃತ್ತಿ ಜೀವನವನ್ನು ಆದರ್ಶವಾಗಿರಿಸಿದ್ದಾರೆ ಎಂದು ಅವರನ್ನು ಅಭಿನಂದಿಸಿ, ಶುಭ ಕೋರಿದರು. ಶಿಕ್ಷಕಿಯ ಹಿರಿಯ ಸಹೋದರ ವಂ ಗುರು ರುಪರ್ಟ್ ಬರ್ಬೋಜಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.
ಮುಖ್ಯ ಅತಿಥಿಯಾಗಿ ಲೂಸಿಯಾ ಬರ್ಬೋಜಾರವರ ವಿದ್ಯಾರ್ಥಿ ಪ್ರಸ್ತುತ ಸಂತ ಅಲೋಷಿಯಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಂ ಗುರು ಮೆಲ್ವಿನ್ ಮೆಂಡೋನ್ಸಾರವರು ಆಗಮಿಸಿದ್ದರು. ತನ್ನ ಪ್ರಾಥಮಿಕ ಶಿಕ್ಷಣದಲ್ಲಿ ಈ ಶಿಕ್ಷಕಿಯಿಂದ ಪ್ರಭಾವಿತರಾದ ಅವರು ಹಲವು ಸನ್ನಿವೇಶಗಳನ್ನು ಸ್ಮರಿಸಿ, ಶುಭ ಕೋರಿದರು. ಶಾಲಾ ಸಂಚಾಲಕರು ವಂ ಭ ಕನ್ಸೆಟ್ಟಾರವರು ಸನ್ಮಾನ ಪತ್ರವನ್ನು ವಾಚಿಸಿದ ಬಳಿಕ ವೇದಿಕೆಯ ಗಣ್ಯರೊಂದಿಗೆ ಫಲಪುಷ್ಪ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಶಾಲಾ ಮುಖ್ಯಸ್ಥೆ ವಂ ಭ ಪ್ರಶಾಂತಿ ಇವರು ಸ್ವಾಗತಿಸಿ ಶಿಕ್ಷಕಿ ಲೀನಾ ಲಿಲ್ಲಿ ಪಿಂಟೊ ಇವರು ಲೂಸಿಯಾ ಬರ್ಬೋಜಾ ಇವರ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಈ ಕಾರ್ಯಕ್ರಮವನ್ನು ಶಿಕ್ಷಕಿ ಆಲಿಸ್ ಡಿಸೋಜ ರವರು ನಿರೂಪಿಸಿ, ಬೆನ್ನಿ ಫೆರ್ನಾಂಡಿಸ್ ಇವರು ವಂದನಾರ್ಪಣೆ ಮಾಡಿದರು. ವಿದ್ಯಾರ್ಥಿಗಳು, ಶಿಕ್ಷಕ – ರಕ್ಷಕ ಸಂಘದ ಪದಾದಿಕಾರಿಗಳು, ಸದಸ್ಯರು, ಪೋಷಕರು, ಹಲವು ಭಗಿನಿಯರು ಹಾಗೂ ರೋಸಾ ಮಿಸ್ತಿಕಾ ಕುಟುಂಬ ಈ ಅದ್ದೂರಿ, ಹೃದಯ ಸ್ಪರ್ಶಿ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.
Rosa Mystica Hr Pry School, Kinnkambla