ಮುಪ್ಪು
ಮುಪ್ಪಿಗೆ ಸೆರೆಯಾಳಾದ ಮುದುಕನ ಅಂದೊಮ್ಮೆ
ಮರದಬಳಿ ಮಾತಾಡಿಸಿದ್ದೆ.
ಇಂದವನು ಬಿದಿರ ಚಟ್ಟವೇರಿ ಪಯಣಿಸುವುದ ಕಂಡು
ಎನ್ನೆದೆ ವ್ಯಥೆಪಟ್ಟು ಸ್ಮರಿಸಿತು ಅವನೇಳಿದ
ಕಂಬನಿಯ ಕಥೆ.
ಮನೆಯೆಂಬ ದೇಗುಲದ ಸರ್ವಾಧಿಪತಿ ನಾನು.
ಎನ್ನ ಮನಸಿನ ಅರಮನೆಯು ಕತ್ತಲಾಗಿಹುದು.
ದೀಪಹಚ್ಚಿ ಮನೆ ಬೆಳಗುವ ಮಕ್ಕಳೆನ್ನ
ರೇಗಿ, ಅವಮಾನಿಸಿ ದೂರುತಿಹರು.
ಮನನೊಂದಿಹುದೆಂದರೂ ಯಾರೂ ಕೇಳದಾದರೆನ್ನ ಕೂಗು.
ಹೊಟ್ಟೆಗೆ ತಣ್ಣೀರ ಬಟ್ಟೆ ಕಟ್ಟಿ ನೆತ್ತರ ಬೆವರು ಸುರಿಸಿ,
ನಾ ಕಟ್ಟಿದ ಕನಸಿನ ಮನೆಯಲಿಂದು
ನೆಲೆಸಲು ಒಂದಿಂಚು ಸ್ಥಳಕೊಡಲು ಹಿಂಜರಿಯುತಿಹರು.
ನನ್ನ ರಕ್ತದ ಕುಡಿಯೆಂದು ಬಗೆ ಬಗೆಯ ತಿಂಡಿ,ತಿನಿಸು
ಹೊಸ ಬಟ್ಟೆಯ ಅಂಗಡಿಯನೇ ಅವರ ಮುಂದಿಟ್ಟೆ ಅಂದು.
ಆದರೆ ಇಂದು
ನನ್ನ ಹಸಿದ ಹೊಟ್ಟೆಗೆ ತುತ್ತು ಅನ್ನ ನೀಡಲು ಮರೆತಿಹರು.
ಹರಿದ ಬಟ್ಟೆಯನಿಂದು ಬಳುವಳಿಯಾಗಿ ನೀಡಿಹರೆನಗೆ.
ಕಾಮದ ಹೆಂಡತಿಯ ಮಾತಿಗೆ ಮರುಳಾಗಿ
ವೃದ್ಥಾಶ್ರಮ ಸೇರೆನ್ನುತಿಹನು ಮಗನೆನಗೆ.
ಕ್ಷಣಿಕ ಬದುಕಿನ ಪಯಣದ ವೇಗದ ಮಿತಿಯನರಿಯದೆ
ನನ್ನ ಮಕ್ಕಳಿಂದು ಎಡವುತಿಹರು.
ಮುಂದವರೂ ಮುಪ್ಪಿನ ಜೀವನ ಸವಿಯಲೇ ಬೇಕಲ್ಲವೆ.
ಅವರಿಗೂ ಮಕ್ಕಳಿಹರೆಂಬುದ್ದನ್ನು ಮರೆತಿರುವರೇನೋ....
ಇಂದೆನಗೆ ಮುಂದೆ ಅವರಿಗೆ ಎಂದೆನಗೆ ಅಜ್ಜ ಅಂದು
ಮರದ ಬಳಿ ಬಹಳ ದು:ಖದಿ ನುಡಿದಿದ್ದ.
ಬದುಕಿನಲಿ ನೊಂದು,ಬೆಂದು,ಇಂದು
ತಮಟೆ ಸದ್ದನ್ನೂ ಲೆಕ್ಕಿಸದೆ ಶಾಶ್ವತ ನಿದ್ರೆಯತ್ತ ಜಾರಿರುವ ಅಜ್ಜ.
ವೃಕ್ಷದ ಹಸಿರೆಲೆ ಹಣ್ಣಾಗುವುದು ಸಹಜ.
ಉಪ್ಪು ತಿಂದವನು ನೀರು ಕುಡಿಯಲೇ ಬೇಕು.
ಇಂದಲ್ಲ ನಾಳೆ ನಾವೆಲ್ಲರೂ ಮುಪ್ಪಿನ ಬದುಕಿನತ್ತ
ಜಾರಲೇ ಬೇಕು. ಅದಕ್ಕು ಮುನ್ನ
ನಾವೆಲ್ಲರು ವೃದ್ಧರ, ಹಿರಿಯರ ಗೌರವಿಸೋಣ.
ಕಾರಣ ಮತ್ತೇನೂ ಅಲ್ಲ
ನಮಗೂ ಬೆನ್ನತ್ತಿಯೇ ಬರುತಿಹುದು
ಮುಪ್ಪು.