ಅಗೋ ನೋಡು
ಕ್ರಿಸ್ತ ಹೊತ್ತ ಶಿಲುಬೆ
ದು:ಖ ಭಾರದ ಮನಕೆ
ಚೇತನದ ಚಿಲುಮೆ !
ಅವಮಾನ ನಿಂದೆಯ
ಭಾರದ ಶಿಲುಬೆ
ಕ್ರಿಸ್ತನ ವಿಜಯದ ಪತಾಕೆ!
ರಕ್ತ ಬೆವರು ಮುಳ್ಳು ಕಿರೀಟ
ಚಾಟಿಯೇಟುಗಳ ದಾರಿ
ತನ್ನವರ ಮೋಸ, ಮಿತ್ರ ದ್ರೋಹ
ಒಂಟಿ ಪಯಣ !
ಬಿದ್ದು ಬಿದ್ದು ಮತ್ತೆದ್ದು
ಮುಂದಿಟ್ಟ ದಿಟ್ಟ ಹೆಜ್ಜೆ
ಸತ್ಯಕ್ಕೆ ಸವಾಲಾಗಿ
ಹೆಗಲಿಗೇರಿದ ಶಿಲುಬೆ !
ದುಷ್ಟರ ಅಟ್ಟಹಾಸ,
ಸುಳ್ಳಿನ ಮೆರೆದಾಟ
ಸತ್ಯ ತಲೆ ತಗ್ಗಿಸಿ
ಅವಮಾನ ಹೊತ್ತಿದೆ !
ಕಲ್ಲು ಬೀರಿದ ದಾರಿಯಲ್ಲಿ
ಜಯ ಹುಡುಕುತಿದೆ!
ದಯೆಯ ಧರ್ಮ
ಸಾರಿದ ದಯಾವಂತನಿಗೆ
ಕೆನ್ನೆಗೇಟು, ತಿರಸ್ಕಾರ
ಬೈಗಳ ಉಗುಳು!
ಕಣ್ಣೀರ ಒರೆಸಿ ಹರಸಿದ
ಕೈಗಳು ಮೊಳೆಗಳ ಬಂಧಿ!
ಮಣ್ಣೊಳಗೆ ಸತ್ತ
ಗೋಧಿಯ ತೊಳಲಾಟ
ಪ್ರಾಣ ಕೊಟ್ಟು
ಜೀವ ಕೊಡುವ
ಧನ್ಯ ಹೋರಾಟ!
ಸಾಯಲೆಂದೇ
ಲೋಕ ಕೊಟ್ಟ ಶಿಲುಬೆ
ಮನುಕುಲದ ಪುನರುಜ್ಜೀವಕ್ಕೆ
ಸಿಕ್ಕಿದ ಫಲವೇ !
ಶಿಲುಬೆ ದಾರಿಯಲ್ಲಿ ನಡೆದು
ಮಾದರಿಯಾದ ಕ್ರಿಸ್ತ
ಶಿಲುಬೆಯ ಬದುಕಿಗೆ
ಇರುವುದು ದೈವ ಹಸ್ತ!
ಕ್ರಿಸ್ತ ಸಹಿಸಿದ ನೋವುಗಳೆಲ್ಲವೂ
ಲೋಕ ಕೊಟ್ಟ ಕೊಡುಗೆ
ಸಜ್ಜನನಿಗೂ ಲೋಕ
ಕೊಡುವ ಕೊಡುಗೆ ಇದೇ !
ಶಿಲುಬೆಯಲ್ಲಿ ಬಂಧಿಯಾದ ಕ್ರಿಸ್ತ
ಹಿಂಸಿಸುವವರಿಗೆ ಮೌನಿಯಾದ
’ನಿನ್ನನ್ನೇ ರಕ್ಷಿಸಿಕೊ” ಎಂದು
ಹಂಗಿಸಿದವರಿಗೆ ಹಾಸ್ಯಾಸ್ಪದನಾದ !
ಹೊರಲಾರದ ಶಿಲುಬೆ ಹೊತ್ತ
ಬದುಕಿಗೆ ಕೊಡುವನು ಕ್ರಿಸ್ತ ಹೆಗಲು
ದೇವ - ಮಾನವ ಜೊತೆಗೆ ನಡೆಯಲು,
ಆಸ್ಪದವೆಲ್ಲಿ ಲೋಕ ನಗಲು?
ಯಾತನೆಯ ಶುಭ ಶುಕ್ರವಾರ
ವ್ಯರ್ಥವೇನಲ್ಲ !
ವಿಜಯದ ಪುನರುತ್ಥಾನದ ಭಾನುವಾರ
ಮುಂದಿದೆಯಲ್ಲ ?
Violet Pinto, Kannada Lecturer,
St. Mary’s PU College, Arsikere.