ಬೆಥನಿ ವಿದ್ಯಾ ಸಂಸ್ಥೆಯ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಸುದೀರ್ಘ 40 ವರ್ಷಗಳ ಕಾಲ ಶಿಕ್ಷಕಿ ಹಾಗೂ ಮುಖ್ಯೋಪಾಧ್ಯಯನಿಯಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ವಂದನೀಯ ಭಗಿನಿ ಲೂಸಿ ಡಿಸೋಜಾ ( ಭ. ಲೂಸಿಕ್ಲೇರ) ರವರು ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಶಿಶುವಿಹಾರ ಹಿ. ಪ್ರಾ. ಶಾಲೆಯಿಂದ ನಿವೃತ್ತರಾದರು. ಅವರ ಗೌರವಾರ್ಥ ವಿದಾಯ ಸಮಾರಂಭವನ್ನು ದಿ. 07.03.2020 ರಂದು ಹಮ್ಮಿಕೊಳ್ಳಲಾಯಿತು.
“ಶಿಕ್ಷಣವೇ ಅಭಿವೃಧ್ದಿಯ ಮಂತ್ರ” ಎಂಬ ಮಾತಿನಂತೆ ಹಗಲಿರುಳೆನ್ನದೇ ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ಶ್ರಮಿಸಿದ ವಂದನೀಯ ಭಗಿನಿ ಲೂಸಿಕ್ಲೇರ್ ತಮ್ಮ ಕೆಲಸದಲ್ಲಿ ಏಕಾಗ್ರತೆ, ಸಮಯಪ್ರಜ್ಞೆ, ಆಡಳಿತ ಕೌಶಲ್ಯ, ನಾಯಕತ್ವದ ಗುಣಗಳು, ವಾಕ್ ಚಾತುರ್ಯ, ಸಹಕಾರ, ಬಡವರಲ್ಲಿ ಅನುಕಂಪ, ಮಾನವೀಯತೆ ಮುಂತಾದ ಆ ಗುಣಗಳು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ ಎಂದು ಹೇಳಲು ಹೆಮ್ಮೆಪಡುತ್ತೇವೆ.
ಸಹೊದ್ಯೋಗಿಗಳೊಡನೆ ಆತ್ಮೀಯತೆ, ಎಳೆಯರಲ್ಲಿ ಅವರು ತೋರಿದ ಒಲವು, ಕಿರಿಯರಿಗೆ ಅವರು ನೀಡಿದ ಮಾರ್ಗದರ್ಶನ, ಜೀವನದಲ್ಲಿ ಬಂದ ಯಾವುದೇ ಸಮಸ್ಯೆಗಳಲ್ಲಿ ಸ್ಪಂದಿಸಿ, ಸೂಕ್ತ ಪರಿಹಾರ ನೀಡುವ ಒಲವಿನ ಮಾತೆ ಎಂದು ಹೇಳಲು ಅಭಿಮಾನ ಪಡುತ್ತೇವೆ. ಅವರ ನಿಸ್ವಾರ್ಥ ಸೇವೆ ಅಭೂತಪೂರ್ವವಾದುದು. ಸಹಸ್ರಾರು ವಿದ್ಯಾರ್ಥಿ ಜೀವನಕ್ಕೆ ದಾರಿದೀಪವಾಗಿ ಬಂದ ಅವರನ್ನು ದೇವರು ಆಶೀರ್ವದಿಸಲಿ, ಅವರ ಮುಂದಿನ ಜೀವನವು ಸುಖ, ಶಾಂತಿ, ನೆಮ್ಮದಿ, ಸಂತೃಪ್ತಿಗಳಿಂದ ಕೂಡಿರಲಿ ಎಂದು ಹಾರೈಸುತ್ತೇವೆ.
ಈ ವಿದಾಯ ಕಾರ್ಯಕ್ರಮವು ಬೆಥನಿ ವಿದ್ಯಾ ಸಂಸ್ಥೆಯ ಪಶ್ಚಿಮ ಪ್ರಾಂತ್ಯದ ಪ್ರಾಂತ್ಯಾಧಿಕಾರಿಣಿ ವಂದನೀಯ ಭಗಿನಿ ಅಸುಂತಾರವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದು, ಬೆಥನಿ ವಿದ್ಯಾ ಸಂಸ್ಥೆಯ ಶಿಕ್ಷಣ ಸಂಯೋಜಕರಾದ ವಂದನೀಯ ಭಗಿನಿ ಪಿಯರಿನ, ಚಿತ್ತಾಪೂರಿನ ಧರ್ಮಗುರುಗಳಾದ ವಂದನೀಯ. ಫಾದರ ಸಲ್ವಾದೋರ, ಶಾಲಾ ಸಂಚಾಲಕಿ ವಂದನೀಯ ಭಗಿನಿ ಸೆಲಿನ, ಜ್ಯೋತಿ ಸೇವಾ ಕೇಂದ್ರದ ಯೋಜನಾಧಿಕಾರಿಗಳಾದ ವಂದನೀಯ ಭಗಿನಿ ಲೂಸಿಪ್ರಿಯಾ, ಬೆಥನಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯನಿ ವಂದನೀಯ ಭಗಿನಿ ಕವಿತಾ ಬಿ.ಸ. ಶಿಶುವಿಹಾರ ಶಾಲೆಯ ಪ್ರಭಾರಿ ಮುಖ್ಯಗುರುಗಳಾದ ಶ್ರೀಯುತ ಅಶೋಕ ಎಲೇರಿರವರು ಪಾಲ್ಗೊಂಡಿದ್ದರು.
ಆಡಳಿತ ಮಂಡಳಿ, ಸಿಬ್ಬಂದಿ ಬಳಗ, ಹಳೆ ವಿದ್ಯಾರ್ಥಿ ವೃಂದ, ಶಾಲಾ ಹಿತೈಷಿಗಳು, ಶಾಲಾ ಮಕ್ಕಳು ಒಲವಿನ ಉಡುಗೊರೆ ಅರ್ಪಿಸಿ, ಹೃದಯಾಂತರಾಳದಿಂದ ಆತ್ಮೀಯವಾಗಿ ಬೀಳ್ಕೊಟ್ಟರು.
ಇದೇ ಶುಭದಿನದಂದು ಬೆಥನಿ ಸಂಸ್ಥೆಯ ಸಂಸ್ಥಾಪಕರಾದ ದೇವರ ಸೇವಕ ವಂದನೀಯ ಫಾದರ ಆರ್ ಎಫ್ ಸಿ. ಮಸ್ಕರೇನಸ್ ರವರ ಭಾವಪುತ್ಥಳಿಯನ್ನು ಉದ್ಘಾಟಿಸಿ ಲೋಕಾರ್ಪಣೆಗೈಯ್ಯಲಾಯಿತು.
ಶ್ರೀ. ಅಶೋಕ ಎಲೇರಿ, ಪ್ರಭಾರಿ ಮುಖ್ಯಗುರುಗಳು
ಶಿಶುವಿಹಾರ ಹಿ. ಪ್ರಾ. ಶಾಲೆ,ಚಿತ್ತಾಪೂರ