ಅದು ಬೆಳಿಗ್ಗೆಯ ಚುಮುಚುಮು ಚಳಿಯೇ ಇರಲಿ, ಧಗಧಗಿಸುವ ಸೆಕೆನೇ ಇರಲಿ, ಬೆಳಿ ಬೆಳಿಗ್ಗೆ ಕಾಫಿಯೋ ಇಲ್ಲ ಟೀನೋ ಗುಟುಕುರಿಸುತ್ತಿದ್ದರೆ ಅದೇನೋ ಧನ್ಯತಾ ಭಾವ! ಹಳ್ಳಿ ಕಡೆಯಲ್ಲಂತೂ ಚಳಿಗಾಲದಲ್ಲಿ ಬೆಂಕಿ ಮಾಡಿಸುತ್ತಾ ಕುಳಿತು ಕಾಫಿ ಹೀರುವ ಮಜಾ ಇದೆಯಲ್ಲ ಅದು ಮಾತಲ್ಲಿ ಹೇಳುವುದಕ್ಕಿಂತ ಒಂದು ಕಪ್ ಕಾಫಿಕೊಟ್ಟೇ ಹೇಳಬೇಕು! ಏನೇ ಹೇಳಿ, ಬೆಳ್ಗಾ ಮುಂಚೆ ಕಾಫಿ ಕುಡಿದೇ ಇದ್ರೆಕೆಲ್ಸಾನೇ ಸಾಗದು!
ಇದರ ಮಹಾತ್ಮೆ ಇಷ್ಟಕ್ಕೇ ಹೇಳಿದ್ರೆ ಅದು ಅಪೂರ್ಣ! ಬೆಳಿಗ್ಗೆ ಪಕ್ಕದ ಮನೆಯವರೋ, ಪರಿಚಿತರೋ ಸಿಕ್ಕಿದ ತಕ್ಷಣ ಕೇಳುವ ಪ್ರಶ್ನೆ, “ಹೊಯ್ ಕಾಪಿ ಆಯ್ತಾ?” ಅಲ್ಲಿಂದ ಮುಗುಳ್ನಗುತ್ತಾ ಬರುವ ಆತ್ಮೀಯ ಉತ್ತರ, “ಕಾಫಿ ಇಲ್ಲಾಂದ್ರೆ ಆಪುದಾಮರಾಯ್ರೆ? ನಿಮ್ದ್‍ಆಯ್ತಾ?. ಅಲ್ಲಿಗೆ ಆ ಪುಟ್ಟ ಭೇಟಿ ಸೌಹಾರ್ದಪೂರ್ಣವೇ.
ಆಫೀಸಲ್ಲೋ, ರೋಡ್‍ಲ್ಲೋಗೆಳೆಯರು ಸಿಕ್ಕಿದ್ರಂತೂ ಬಿಡದೆ ಹೆಗಲ ಮೇಲೆ ಕೈ ಹಾಕಿ, “ಬಾಮಾರಾಯ, ಕಾಫಿ ಕುಡ್ಕಂಡ್ ಬಪ್ಪ” ಅಂತಲೋ, “ಏಯ್ ಎಂತಾ ಚಾ ಗೀಕುಡ್ಸ್ತ್ಯಾ ಇಲ್ಲ್ಯಾ?” ಎನ್ನುವ ಆತ್ಮೀಯ ಗದರಿಕೆ. ಜಿಪುಣರನ್ನು ಕಂಡಾಗ, “ಒಂದ್ ಚಾಕುಡ್ಸು ಕೂಯೋಗ್ತೆ ಇಲ್ಲ, ಮಾತಾಡುದ್ ಕಂಡ್ರೆ ಸಾಕ್”. ಕಾಫಿ ಟೀಯಲ್ಲೇ ಮನುಷ್ಯನ ಯೋಗ್ಯತೆ ಅಳೆಯಲ್ಪಡುತ್ತದೆ!
ಇನ್ನು ಮನೆಗೆ ನೆಂಟರಿಷ್ಟರು ಬಂದ್ರೆ, “ಸ್ವಲ್ಪ ಕಾಪಿ üಕುಡ್ಕಂಡ್ ಹೋಯ್ನಿ” ಸಂಭ್ರಮದ ಉಪಚಾರ. ಏನೇ ಬಡಿಸಿದರೂ ಕಾಫಿ ಅಥವಾ ಟೀ ಇಲ್ಲದೇ ಇದ್ರೆ ಅದು ನೀರಸ ಉಪಚಾರವೇ ಸರಿ!
ಪರೀಕ್ಷೆ ಪಾಸ್ ಆದಾಗಲೋ, ಪ್ರಮೋಶನ್ ಸಿಕ್ಕಾಗಲೋ, ಮದುವೆ ಫಿಕ್ಸ್ ಆದಾಗಲೋ, ಕೆಲ್ಸ ದೊರೆತಾಗಲೋ… ಅಥವಾ ಏನೇ ಖುಷಿ ಸಮಾಚಾರ ಕೇಳಿದಾಗಲೋ ಫ್ರೆಂಡ್ಸ್ ಒಂದೇ ಸಮನೆ ಪೀಡಿಸುವ ಪ್ರಶ್ನೆ “ಕಾಫಿ ಯಾವಾಗ ಕುಡ್ಸ್ತೆಮಾರಾಯ?”
ಗಮ್ಮತ್ತಿನ ವಿಚಾರವೆಂದರೆ, ಕಾಫಿ ಕುಡಿಯೋಕೆ ಕುಡಿಸಲಿಕ್ಕೆ ಕಾರಣಗಳೇ ಬೇಕಿಲ್ಲ! ಗೆಳೆಯರು ಸಿಕ್ಕಿದರೆಂದರೆ, ಬೇಜಾರಾಯಿತೆಂದರೆ, ಕಾಫಿ ಅಥವಾ ಟೀ ಸಮಾರಾಧನೆಯಿಂದಲೇ ನೆಮ್ಮದಿ! ಕಾಫಿ, ಟೀ ಗುಟುಕರಿಸುತ್ತಾ, ನಗೆ ಚಟಾಕಿ ಹಾರಿಸುತ್ತಾ, ಹೋಟೆಲ್ಲಿಂದ ಹೊರಬರುತ್ತಿದ್ದರೆ ಅದು ಸ್ನೇಹವಲ್ಲವೆನ್ನಲಾದೀತೇ?
ಇನ್ನು ಆಫೀಸ್ಗಳಲ್ಲಿ ಕೆಲಸ ವಾಗಬೇಕಾದರೆ ದೊಡ್ಡವರಿಂದ ಹಿಡಿದು ಅತೀ ಕೆಳಗಿನವರಿಗೂ ಕಾಫಿಯ ಸೇವೆ ನೆರವೇರಿಸಿದರೇ ಕೆಲಸ ಆರಂಭಿಸುವುದು. “ತಕ್ಕೋ ಕಾಫಿ ಕುಡ್ಕೋ’ ಕೆಳದರ್ಜೆಯ ಕೆಲಸದವರಿಗೆ ಪುಡಿಗಾಸು ಕೊಟ್ಟರೆ ಅರ್ಧ ಕೆಲಸ ಪೂರೈಸಿದಂತೆಯೇ.
ಪುಟ್ಟ ಕಪ್ ಕಾಫಿಗೆ, ಟೀ ಗೆ ಇಷ್ಟೊಂದು ಗೌರವವೇ? ಎಲ್ಲೋ ಕಾಡು ಗುಡ್ಡಗಳಲ್ಲಿ, ಜನ ಸಂಚಾರ ವಿರಳ ಇರುವ ಪ್ರದೇಶಗಳಲ್ಲಿ ಬೆಳೆಯುವ ಚಿಕ್ಕ ಕಾಫಿ ಬೀಜ, ಪುಟ್ಟ ‘ಚಾ’ ದ ಎಲೆಗೆ ಇಷ್ಟೊಂದುರಾಜ ಮರ್ಯಾದೆಯೇ? ಬರೇ ಶರೀರದ ಬಯಕೆಗಷ್ಟೇ ಸೀಮಿತವಾಗಿರದೆ, ಮಾನವ-ಮಾನವ ಸಂಬಂಧಗಳನ್ನು ಬೆಸೆಯುವಂತಹ, ಬೆಳೆಸುವಂತಹ ಇದರ ಗುಣಕ್ಕೆ ಏನನ್ನೋಣ?
ವಾಣಿಜ್ಯ ಬೆಳೆಯಾಗಿರುವ ಕಾಫಿ ಹಾಗೂ ಟೀಯಿಂದ ನಾವು ಕಲಿಯಬೇಕಾದ ಪಾಠ ಬಹಳಷ್ಟಿದೆ! ಮನುಷ್ಯನ ಬದುಕಿನಲ್ಲಿ ಅತೀ ಪ್ರಿಯವಾದ ಹಾಗೂ ಅನಿವಾರ್ಯವಾದ ಈ ಪೇಯಗಳ ಮುಂದೆ ನಮ್ಮ ಸ್ಥಾನಮಾನವೇನು? ಇನ್ನೊಬ್ಬರ ಬದುಕಿನಲ್ಲಿ ನಾವು ಇಷ್ಟೊಂದು ಪ್ರಿಯವಾಗಿದ್ದೇವೇಯೇ? ಇನ್ನೊಬ್ಬರ ಕಷ್ಟ ಸುಖಗಳಲ್ಲಿ ನಾವು ನೆನಪಾಗುವ ನೆರಳಾಗಿದ್ದೇವೆಯೇ? ಸಾಮಾನ್ಯ ಪ್ರದೇಶಗಳಲ್ಲಿ ಬೆಳೆಯುವ ಈ ಬೆಳೆಗಳು ತಮ್ಮಗುಣ ಹಾಗೂ ಅಪರೂಪದ ಶಕ್ತಿಯಿಂದ ಮಾತ್ರಜನ ಮನ್ನಣೆ ಪಡೆದಿವೆ. ನಾವು ನಮ್ಮಗುಣದಿಂದ, ಮಾತು-ಕೃತಿಗಳಿಂದ ಜನಪ್ರಿಯವಾಗಿದ್ದೇವೆಯೇ? ಇನ್ನೊಬ್ಬg ಉಲ್ಲಾಸಕ್ಕೆ, ಉತ್ಸಾಹಕ್ಕೆ ನಾವು ಸ್ಪೂರ್ತಿಯಾಗಿದ್ದೇವೆಯೇ? ಎಲ್ಲಾ ಕಾಲಕ್ಕೂ ನಮ್ಮ ವರ್ತನೆ ಹೊಂದಿಕೆಯಾಗುತ್ತದೆಯೇ? ನಮ್ಮ ಸಂಗ ಇನ್ನೊಬ್ಬರ ಮುಖದಲ್ಲಿ ನಗುವನ್ನು ಅರಳಿಸುತ್ತದೆಯೇ? ಮತ್ತೊಬ್ಬರಿಗೆ ನಾವು ಎಷ್ಟು ಅನಿವಾರ್ಯವಾಗಿದ್ದೇವೆ?
ಮೊನ್ನೆ ಬಿಸಿ ಬಿಸಿ ಟೀ ಕುಡಿಯುತ್ತಿದ್ದಾಗ ನನಗೆ ಜ್ಞಾನೋದಯವಾದದ್ದು ಹೀಗೆ!
ಶ್ರೀಮತಿ ವೈಲೆಟ್ ಪಿಂಟೋ
ಸೈಂಟ್ ಮೇರಿಸ್ ಸಂಯುಕ್ತ ಪ.ಪೂ. ಕಾಲೇಜು,ಅರಸೀಕೆರೆ