ಇನ್ ಸ್ಟಂಟ್ ಕಾಫಿ, ಇನ್ ಸ್ಟಂಟ್ ಇಡ್ಲಿ, ಒನ್ ಮಿನಿಟ್ ಬ್ರೇಕ್ ಫಾಸ್ಟ್ ನಂತಹ  ಫಾಸ್ಟೆಸ್ಟ್ ಯುಗದಲ್ಲಿ ಎಲ್ಲವೂ ರೆಡಿಯಾಗಿ ಸಿಕ್ಕಿದರೇನೇ ಬದುಕು ಸುಸೂತ್ರ !  ಕಾಯುವಂತಹ ತಾಳ್ಮೆಯಾಗಲೀ, ಪುರುಸ್ಸೊತ್ತಾಗಲೀ, ಯಾರಲ್ಲೂ ಉಳಿದಿಲ್ಲ !  ಮಗುವಿಗೆ 2 ವರ್ಷ ತುಂಬುವುದರೊಳಗೆ ಬ್ರಹ್ಮಾಂಡದ ಅಷ್ಟೂ ವಿದ್ಯೆಗಳನ್ನು ತಲೆಯೊಳಗೆ ತುರುಕುವ ತವಕ !  ಮೀಸೆ ಬಲಿಯುವುದರೊಳಗೆ ಪ್ರತಿಷ್ಟಿತ ಉದ್ಯೋಗ, ದೊಡ್ಡ ಮೊತ್ತದ ಸಂಪಾದನೆಯತ್ತ ಓಡುವ ತವಕ !  ಯೌವನಕ್ಕೆ ಕಾಲಿಡುವ ಮೊದಲೇ ಸಂಗಾತಿಯನ್ನು ಕೂಡುವ ತವಕ !  ರಾತ್ರಿ ಬೆಳಗಾಗುವುದರೊಳಗೆ ಶ್ರೀಮಂತರಾಗುವ ತವಕ !  ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದಾಗ ಸಹನೆಯ ಮಿತಿ ಮೀರುತ್ತದೆ.  ಬರಬೇಕಾದ ಬಸ್ಸು ಸರಿಯಾದ ವೇಳೆಗೆ ಬಾರದೇ ಇದ್ದಾಗ ಹುಬ್ಬುಗಳು ಗಂಟಿಕ್ಕುತ್ತವೆ.  ಶಾಲೆಯಿಂದ ಬರಬೇಕಾದ ಮಕ್ಕಳು ಬಾರದೇ ಇದ್ದಾಗ, ಕಾಲುಗಳು ಮನೆಯಿಂದ ಅಂಗಳಕ್ಕೆ ಸುದೀರ್ಘ ಪಾದಯಾತ್ರೆ ನಡೆಸುತ್ತವೆ.  ಹೊರಗೆ ಸುತ್ತಾಡಲು ಕರೆದುಕೊಂಡು ಹೋಗುತ್ತೇನೆಂದ ಗಂಡ ಸಂಜೆ ಮೀರಿದರೂ ಮನೆಗೆ ಬಾರದೇ ಇದ್ದಾಗ, “ಇಂತಹ ಗಂಡನನ್ನು ಕಟ್ಟಿಕೊಂಡು ಜೀವಮಾನವೆಲ್ಲಾ ಏಗಿದ ಹಾಗೆಯೇ” ಸಿಟ್ಟು ನೆತ್ತಿಗೇರುತ್ತದೆ !  ಗೆಳತಿ/ಗೆಳೆಯರ ಫೋನ್ ಬಾರದೇ ಇದ್ದಾಗ “ಎಲ್ಲರೂ ಅಷ್ಟೇ.  ಪ್ರೀತಿ ಸ್ನೇಹ ಎದುರಿಗಿದ್ದಾಗ ಮಾತ್ರ” ಅಂತಿಮ ನಿರ್ಧಾರಕ್ಕೆ ಅಸಹನೆ ಜೊತೆಯಾಗಿ ಬಿಡುತ್ತದೆ.

ಪ್ರತಿನಿತ್ಯದ ಬದುಕಿನಲ್ಲಿ ಸಣ್ಣ ಪುಟ್ಟ ಸಂಗತಿಗಳು ನಾವು ಎಣಿಸಿದಂತೆ ನಡೆಯದಿದ್ದಾಗ, ತಾಳ್ಮೆ ಸಂಯಮ ಮೀತಿ ಮೀರಿ ಕಲಹ ಮನಸ್ತಾಪಗಳೇರ್ಪಡುತ್ತವೆ.  ಸಂಬಂಧಗಳು ಮುರಿದು ಬೀಳುವ ಸನ್ನಿವೇಶ ನಿರ್ಮಾಣವಾಗುತ್ತದೆ.  ಎಷ್ಟೋ ವೇಳೆ ಉತ್ತಮ ಫಲಿತಾಂಶವನ್ನು ಕಳೆದುಕೊಳ್ಳುವ ಸಂಭವವೂ ಉಂಟು !  ತನ್ನ ಅಸಹನೆಯಿಂದ ಮನೆ ಮಂದಿಯವರ, ಸುತ್ತಮತ್ತಲಿನವರ ಚಿತ್ತ ಸ್ವಾಸ್ಥ್ಯವನ್ನು ಕದಡಿ ಬಿಡುವ ಪರಿಸ್ಥಿತಿಯೂ ಉಂಟಾಗುತ್ತದೆ.  ಸಹನೆ ತಾಳ್ಮೆ ಕೈಕೊಟ್ಟಾಗ, ಮಾನಸಿಕ ಒತ್ತಡವೇರ್ಪಟ್ಟು ಕಾಯಿಲೆಗಳು ಕಾಡಬಹುದು.  ಪರಿಸ್ಥಿತಿಗೆ ಕಾಯದೇ, ಅವಸರ ಆತುರದ ತೀರ್ಮಾನ ಕೈಗೊಂಡು ಬದುಕಿನುದ್ದಕ್ಕೂ ಪರಿತಪಿಸುವ ಸಂದರ್ಭವೂ ಬರಬಹುದು !

ಬದುಕಿನ ಗೊಂದಲ ಗದ್ದಲಗಳಲ್ಲಿ ಸಿಲುಕಿ, ಕಾಯುವಿಕೆ ಅಸಹನೀಯವಾದಾಗ, ಪ್ರಕೃತಿಯ ಮಡಿಲಲ್ಲಿ ಒರಗಿ ಸುತ್ತಲೂ ನೋಡಿದಾಗ, ಅದು ಮನುಷ್ಯನಿಗೆ ಸಹನೆಯ ಸುಂದರ ಪಾಠ ಕಲಿಸುತ್ತದೆ !  ಭೂಮಿಯೊಡಲಲ್ಲಿ ಸೇರಿದ ಬೀಜ ಮೊಳೆತು ಬಲಿತು ಸಸಿಯಾಗಿ ಮರವಾಗಿ ಫಲ ಬಿಡಲು ಅದೆಷ್ಟು ಕಾಲ ಬೇಕಲ್ಲವೇ ?  ಚಿಗುರಲ್ಲಿ ಅಡಗಿದ ಮೊಗ್ಗು ಬಲಿತು ಒಂದೊಂದೇ ಪಕಳೆಗಳನ್ನು ಬಿಡಲು ಅದೆಷ್ಟು ದಿನ ಕಾಯಬೇಕಲ್ಲವೇ?  ಹೀಚುಕಾಯಿ ಹಣ್ಣಾಗಲು ಸಹನೆಯಿಂದ ಕಾಯಬೇಕಲ್ಲವೇ?  ಪೂರ್ಣ ಚಂದ್ರ ಮತ್ತೊಮ್ಮೆ ಕಾಣಿಸಲು ಇನ್ನೊಂದಿಷ್ಟು ದಿನ ಬೇಕಲ್ಲವೇ?  ರೈತ ಉತ್ತು ಬಿತ್ತು ಮಳೆಗಾಗಿ ಕಾದಾಗ ಮಾತ್ರ ಪೈರಲ್ಲವೇ?  ಗರ್ಭದೊಳಗಿನ ಭ್ರೂಣ ಬೆಳೆದು ಭೂಮಿಗೆ ಅಂಬೆಗಾಲಿಕ್ಕಿ, ತೊದಲು ನುಡಿದು, ತಪ್ಪು ಹೆಜ್ಜೆಗಳನಿಟ್ಟು ನಡೆದು , ಮುಗ್ಢ ಮುದ್ದು ಮನಸ್ಸು ಬಲಿಯಲು ಎಷ್ಟೋ ವರ್ಷ ಕಾಯಬೇಕು !  ಆದರೆ ಕಾಯುವ ಪ್ರತೀ ಹಂತಕ್ಕೂ ಅದರದೇ ಆದ ಮಹತ್ವದ  ಪಾತ್ರವಿದೆ.  ಅದರದೇ ಆದ ಸೌಂದರ್ಯವಿದೆ.

ಕಾಯುವಿಕೆಯ ಕಿರಿಕಿರಿಯನ್ನು ಸಹನೆಯೆಂದು ಕರೆಯಲಾಗದು.  ಅದು ಅನಿವಾರ್ಯವಾದಾಗ ಸಹನೆಯ ಪಾಠವನ್ನು ಕಲಿಯಲೇಬೇಕಾದ್ದು ಅನಿವಾರ್ಯ !  ಕಾಯುವಿಕೆಯ ಈ ಹಂತದಲ್ಲಿ ಮನಸ್ಸನ್ನು ಇನ್ನಿತರ ಸಂಗತಿಗಳತ್ತ ಒಯ್ಯುವುದು, ಹಾಡನ್ನು ಗುನುಗುನಿಸುವುದು, ಪುಸ್ತಕಗಳನ್ನು ಓದುವುದು, ಯಾವುದೋ ಸುಂದರವಾದ ನೆನಪನ್ನು ಮೆಲುಕು ಹಾಕುವುದು, ತಲೆ ತಿನ್ನುವ ಪಾಠದ ಉತ್ತರವನ್ನು ನೆನಪಿಸಿಕೊಳ್ಳಲು ಪ್ರಯತ್ನಿಸುವುದು, ಪದ್ಯವನ್ನು ಬಾಯಿಪಾಠ ಮಾಡಿಕೊಳ್ಳುವುದು,....ಹೀಗೆ ಮನಸ್ಸನ್ನು ಬೇರೆ ಕಡೆ ಹೊರಳಿಸಿದಾಗ, ಕಾಯುವ ಕಿರಿಕಿರಿಗೆ ಬ್ರೇಕ್ ಕೊಟ್ಟಂತಾಗುತ್ತದೆ.

ಕೆಲವೊಂದು ಸಂಗತಿಗಳಿಗೆ ಕೊಂಚ ಕಾಲ ವಿರಾಮ ಕೊಟ್ಟು ಕಾದಾಗ ಉತ್ತಮ ಫಲಿತಾಂಶ ಸಿಗಬಹುದು.  ಪ್ರೀತಿ ಪ್ರೇಮಗಳ ಸಂಬಂಧವನ್ನು ಬೆಸೆಯುವಾಗ, ಸ್ವಲ್ಪ ಕಾಲ ಕಾದು ನೋಡಿದಾಗ, ಇನ್ನೂ ಉತ್ತಮವಾದ ಸಂಬಂಧ ದೊರೆಯಬಹುದು.  ದಾಂಪತ್ಯದಲ್ಲಿ ಕಲಹ ಕಂದಕವೇರ್ಪಟ್ಟು, ಇನ್ನು ಮುಂದೆ ಒಂದಾಗಿ ಬಾಳಲು ಸಾಧ್ಯವೇ ಇಲ್ಲ ಎಂದು ವಿಚ್ಚೇದನಕ್ಕೆ ತೀರ್ಮಾನಿಸುವ ಮೊದಲು, ಒಂದಷ್ಟು ದಿನ ಕಾದು ನೋಡಿದಾಗ, ದಂಪತಿಗಳು ಮತ್ತೆ ಒಂದಾಗಲೂ ಬಹುದು.  ತಪ್ಪಿತಸ್ಥನನ್ನು ದಂಡಿಸಿ ಶಿಕ್ಷಿಸುವ ಮೊದಲು, ಅಪರಾಧಿಗೆ ಒಂದಷ್ಟು ತಿದ್ದುವ ಅವಕಾಶ ಕೊಟ್ಟು ಕಾದಾಗ, ಬಹುಷ: ಆತ ಬದಲಾಗಲೂ ಬಹುದು.  ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿ ತಲೆ ಮೇಲೆ ಕೈಹೊತ್ತು “ಈ ಜನ್ಮದಲ್ಲಿ ವಿದ್ಯೆ ತಲೆಗೆ ಹತ್ತುವುದಿಲ್ಲ” ಎಂದು ಹತಾಶವಾಗಿರುವ ಮನಸ್ಸು ಶಾಂತವಾಗಿ ಯೋಚಿಸಿ, ಇನ್ನೊಮ್ಮೆ ಪ್ರಯತ್ನ ಮಾಡುವತ್ತ ಕಾಯುವ ಉತ್ಸಾಹ ತೋರಿದಾಗ ಯಶಸ್ಸು ಸಿಗಬಹುದು.  ಬದುಕಿನ ಜಂಜಾಟದಲ್ಲಿ ಕಂಗಾಲಾಗಿ, ಎಲ್ಲಾ ದಾರಿಗಳು ಮುಚ್ಚಿದಂತಾಗಿ, ಸಾವೊಂದೇ ಪರಿಹಾರ ಎನ್ನುವ ಜೀವಗಳು, ಆತ್ಮಹತ್ಯೆಯ ಹೊಸಿಲಿನಿಂದ ಕೊಂಚ ಸರಿದು, ಈಚೆಗೆ ಬಂದು ಬದುಕಲು ಇನ್ನೊಂದು ಅವಕಾಶಕ್ಕಾಗಿ ಕಾದು ನೋಡುವ ಸಂಯಮ ತೋರಿದಾಗ, ಅಮೂಲ್ಯ ಜೀವದಾನ ಪಡೆಯಬಹುದು.

ಹಾಗಂತ ಬದುಕಿಡೀ ಅವಕಾಶಗಳಿಗಾಗಿ ಕಾದು ಕುಳಿತಿರುವುದಲ್ಲಿ ಅರ್ಥವಿಲ್ಲ.  “ಆಲಸ್ಯಂ ಅಮೃತಂ ವಿಷಂ”.  ನಿಧಾನವಾದರೆ ಅಮೃತವೂ ವಿಷವಾಗಬಹುದು!  ಬುದ್ಧಿ ವಿವೇಚನೆ ಸಮಯ ಪ್ರಜ್ಞೆಯನ್ನು ಉಪಯೋಗಿಸಿಕೊಂಡು ಅವಕಾಶಗಳನ್ನು ಆಳವಾಗಿ ಯೋಚಿಸಿ ತೀರ್ಮಾನಿಸುವುದು ಸೂಕ್ತ.

ಪರಿಸ್ಥಿತಿಗಳು ಮಾನವ ಪ್ರಯತ್ನಕ್ಕೆ ಮೀರಿ ವರ್ತಿಸಿದಾಗ, ಬದುಕಿನ ರಥದ ಗಾಲಿಗಳು ಜಪ್ಪಯ್ಯವೆಂದರೂ ಉರುಳಲು ಒಲ್ಲೆ ಎಂದಾಗ, ”ತಲ್ಲಣಿಸದಿರು ಕಂಡ್ಯ ತಾಳು ಮನವೇ, ಎಲ್ಲರನ್ನು ಸಲಹುವನು ಇದಕ್ಕೆ ಸಂಶಯವಿಲ್ಲ”  ನಂಬಿಕೆ ಕಳಕೊಂಡು  ಗೋಳಾಡುವ ಮನಸ್ಸನ್ನು ತಟ್ಟಿ ಸಂತೈಸುತ್ತಾ ಬದುಕಿನ ಸೂರ್ಯೋದಯಕ್ಕಾಗಿ ಕಾದು ನೋಡುವುದೊಂದೇ ಪರಿಹಾರ !
“ಪ್ರತಿಯೊಂದು ಕಾರ್ಯಕ್ಕೂ ನಿಗದಿಯಾದ ಕಾಲವಿದೆ. ಜಗತ್ತಿನಲ್ಲಿ ನಡೆಯುವ ಒಂದೊಂದು ಕೆಲಸಕ್ಕೂ ಸೂಕ್ತ ಸಮಯವಿದೆ:
ಹುಟ್ಟುವ ಸಮಯ, ಸಾಯುವ ಸಮಯ,
ನೆಡುವ ಸಮಯ, ನೆಟ್ಟದ್ದನ್ನು ಕೀಳುವ ಸಮಯ.
ಕಲ್ಲುಗಳನ್ನು ಬಿಸಾಡುವ ಸಮಯ
ಕಲ್ಲುಗಳನ್ನು ಕೂಡಿಸುವ ಸಮಯ
ಗಳಿಸುವ ಸಮಯ, ಕಳೆದುಕೊಳ್ಳುವ ಸಮಯ
ಕಾಪಾಡುವ ಸಮಯ, ಬಿಸಾಡುವ ಸಮಯ.
ಹರಿಯುವ ಸಮಯ, ಹೊಲಿಯುವ ಸಮಯ,
ಸುಮ್ಮನಿರುವ ಸಮ್ಯ, ಮಾತಾಡುವ ಸಮಯ
ಹಿಗೆ ಒಂದೊಂದು ಕೆಲಸಕ್ಕೂ ತಕ್ಕ ಸಮಯವುಂಟು”  (ಪವಿತ್ರ ಬೈಬಲ್)

ವೈಲೆಟ್ ಪಿಂಟೋ, ಕನ್ನಡ ಉಪನ್ಯಾಸಕಿ,
ಸೈಂಟ್ ಮೇರಿಸ್ ಪದವಿ ಪೂರ್ವ ಕಾಲೇಜು, ಅರಸೀಕೆರೆ
  

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : adminhq@besmangalore.org