July 22: “ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ” ಎಂಬ ನಾಣ್ಣುಡಿಯಂತೆ ಹೆಣ್ಣು ಕೇವಲ ನಾಲ್ಕು ಗೋಡೆÀಗಳಿಗೆ ಮಾತ್ರ ಸೀಮಿತ ಎಂಬ ಸಮಾಜದ ಅಭಿಪ್ರಾಯವನ್ನು ಬದಲಾಯಿಸುವ ಪಣತೊಟ್ಟು ಹಲವಾರು ಶಾಲೆಗಳನ್ನು ತೆರೆದು ಅಲ್ಲಿ ಹೆಣ್ಣುಮಕ್ಕಳಿಗೆ ಹೆಚ್ಚು ಆದ್ಯತೆಯನ್ನು ಕೊಟ್ಟು ಕೇವಲ ನಾಲ್ಕು ಜನ ಭಗಿನಿಯರ ಜೊತೆ ಸೇರಿ ದೇವರ ಸೇವಕ ಆರ್.ಎಫ್.ಸಿ. ಮಸ್ಕರೇನಸ್‍ರವರು 1921ರಲ್ಲಿ ಬೆಥನಿ ಎಂಬ ಸಂಸ್ಥೆಯನ್ನು ಒಂದು ಸಣ್ಣ ಗ್ರಾಮದಲ್ಲಿ ಶಿಕ್ಷಣವನ್ನು ಪ್ರಾರಂಭಿಸಿದರು. ಆ ಸವಿ ನೆನಪಿನ ವರ್ಷಾಚರಣೆ ಪ್ರತಿ ವರ್ಷ ನಮ್ಮ ಶಾಲೆಯಲ್ಲಿ ಆಚರಿಸಲಾಗುತ್ತದೆ.
ಈ ಬೆಥನಿ ಸಂಸ್ಥೆ ಪ್ರಾರಂಭವಾಗಿ 103ವರ್ಷಗಳು ಕಳೆದರೂ, ಇದರ ಮೂಲ ಉದ್ದೇಶಗಳನ್ನು ಇಡೇರಿಸುವುದರಲ್ಲಿ ಯಶಸ್ವಿ ಕಾಣುತ್ತ ನಡೆದಿದೆ ಎಂದು ಹೆಮ್ಮೆಯಿಂದ ಬೀಗುತ್ತ, ನಮ್ಮ ಶಾಲೆಯಲ್ಲಿ ದಿ 15/07/2024ರ ಸೋಮವಾರದಂದು ಬೆಳಿಗ್ಗೆ 9.00 ಗಂಟೆಗೆ ಸರಿಯಾಗಿ ಬೆಥನಿ ಪ್ರೌಢ ಶಾಲೆ ಮತ್ತು ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆ ಒಟ್ಟುಗೂಡಿ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮವನ್ನು ಆಚರಿಸಲಾಯಿತು.
ಕಾರ್ಯಕ್ರಮವು ಪ್ರಾರ್ಥನಾ ನೃತ್ಯದ ಮೂಲಕ ಆರಂಭವಾಗಿ ಸಂಸ್ಥೆಯ ಮೌಲ್ಯಗಳನ್ನಾಧರಿಸುವ ನಾಟಕಗಳನ್ನು ಪ್ರದರ್ಶಿಸುವುದರ ಮೂಲಕ ಕಾರ್ಯಕ್ರಮ ಮುಂದುವರೆದು ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆಯ ಮುದ್ದು ಮಕ್ಕಳಿಂದ ನೃತ್ಯಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳೆಲ್ಲರಿಗೂ ಸಿಹಿ ಹಂಚುವುದರ ಮೂಲಕ ಹಬ್ಬದ ಆನಂದವನ್ನು ದ್ವಿಗುಣಗೊಳಿಸಲಾಯಿತು.
ನಂತರ ವಿದ್ಯಾರಾಣಿ ಕಾನ್ವೆಂಟಿನ ಎಲ್ಲ ಭಗಿನಿಯರನ್ನು ಆಹ್ವಾನಿಸಿ ಬೆಥನಿ ಪ್ರೌಢ ಶಾಲೆ, ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆ ಮತ್ತು ಇಂಡೋಜರ್ಮನ್ ಆಸ್ಪತ್ರೆ ಹಾಗೂ ಜ್ಯೋತಿ ಸೇವಾ ಕೇಂದ್ರದ ಎಲ್ಲ ಸಿಬ್ಬಂದಿ ವರ್ಗದವರು ಒಟ್ಟುಗೂಡಿ ಅವರಿಗಾಗಿ ಪ್ರಾರ್ಥಿಸಿ ಶುಭಾಷಯ ಹಾಡನ್ನು ಹಾಡಿದೆವು. ವಿದ್ಯಾರಾಣಿ ಕಾನ್ವೆಂಟಿನ ಮುಖ್ಯಸ್ಥೆ ಭಗಿನಿ ಸ್ಯಾಂಡ್ರಾರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನಾವೆಲ್ಲರೂ ಒಂದು ಕುಟುಂಬದಂತೆ ಇಂದಿಲ್ಲಿ ಸೇರಿದ್ದೇವೆ. ಸದಾ ನಮ್ಮಲ್ಲಿ ಈ ಭಾತೃಭಾವನೆ ಜೀವಂತವಾಗಿರಲಿ ನಮ್ಮ ಸೇವೆಗೆ ನೀವು ತೋರಿಸಿದ ಪ್ರೀತಿ, ಸಹಕಾರ ಮುಂದೆಯೂ ಹೀಗೆಯೆ ಇರಲಿ ಎಂದು ಆಶಿಸುತ್ತ, ಚಿತ್ತಾಪೂರದಲ್ಲಿ ಬೆಥನಿ ಸಂಸ್ಥೆಯು ಇನ್ನೂ ಹೆಚ್ಚಿನ ಅಭಿವೃದ್ಧಿಯತ್ತ ಸಾಗಲಿ ಎಂದು ದೇವರಲ್ಲಿ ಹಾರೈಸುತ್ತ ತಮ್ಮ ನುಡಿಗಳಿಗೆ ವಿರಾಮವನ್ನಿಟ್ಟರು. ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಶ್ರೀಮತಿ ಅರ್ಚನಾ, ಸಹ ಶಿಕ್ಷಕಿ
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ