ಸಾಕ್ಷಿಯಾದ ಕ್ರಿಸ್ತ ತ್ಯಾಗ ಪ್ರೀತಿಗೆ
ಧರ್ಮಕ್ಕೂ ಮಿಗಿಲಾದ ಮಾನವತೆಗೆ
ಶಿಲುಬೆಗೇರಿದ ಕ್ರಿಸ್ತ ಸತ್ಯದ ಉಳಿವಿಗೆ
ತನ್ನನ್ನು ಅನುಸರಿಸುವವರಿಗೆ ದೀವಿಗೆಯಾಗಿ
ಬಗ್ಗಿ ಪಾದ ತೊಳೆಯುವಷ್ಟೂ ಸೇವಕನಾದ
ನಾಯಕನ ಕರ್ತವ್ಯ ತೋರಿಸಲು
ಕುಷ್ಟ ರೋಗಿಗಳನ್ನು ಪ್ರೀತಿಯಿಂದ ಮುಟ್ಟಿದ
ಅಸಮಾನತೆಯ ರೋಗ ಗುಣಪಡಿಸಲು
ಅಲ್ಪ ಆಹಾರದಲ್ಲೇ  ಅಪಾರ ಜನರನ್ನು ಉಣಿಸಿದ
ಹಂಚಿ ತಿನ್ನುವ ರುಚಿ ಕಲಿಸಲು
ಸಹಜ ನೀರನ್ನು ತಾಜಾ ದ್ರಾಕ್ಷಾರಸವನ್ನಾಗಿಸಿದ
ಕೊರತೆಯಲ್ಲೂ ದೈವ ಸಹಾಯ ಸಿಗಲೆಂದು
ವ್ಯಭಿಚಾರಿಣಿಯನ್ನು ಕರುಣೆಯಿಂದ ಕ್ಷಮಿಸಿದ
ಕಲ್ಲು ಬೀರುವವರ ಅಂತರಂಗ ಬಯಲಾಗಲೆಂದು
ಕೊನೆಯ ಕ್ಷಣದಲ್ಲಿ ಬೇಡಿದ ಕಳ್ಳನಿಗೆ ವರದಾನ ನೀಡಿದ
ಪಶ್ಚಾತ್ತಾಪದ ಹೃದಯಗಳಿಗೆ ಸ್ವರ್ಗ ನಿಶ್ಚಯವೆಂದು
ತನ್ನನ್ನು ನಿರಾಕರಿಸಿದ ಪೇತ್ರನನ್ನು ಸ್ನೇಹದಿಂದ ದಿಟ್ಟಿಸಿದ
ದ್ವಂದ್ವ ಮನಸ್ಸುಗಳನ್ನು ಸ್ಥಿರಗೊಳಿಸಲೆಂದು
ಸ್ನೇಹಿತ ಲಾಜರನ ಸಮಾಧಿಗೆ ಜೀವ ತುಂಬಿದ
ಕೊಳೆತ  ಆತ್ಮಗಳಿಗೆ ಪುನರ್ಜೀವ ನೀಡಲು
ದುಂದುಗಾರ ಮಗನ ಕಥೆ ಹೇಳಿದ
ಮರುಗಿ ಮರಳಿ ಬಂದವನಿಗೆ ಕ್ಷಮೆ ದೊರಕಲೆಂದು
ಮಿತ್ರರೋಂದಿಗೆ ಸಹಭೋಜನ ನಡೆಸಿದ
ಧರೆಯಲ್ಲಿ ಸಹೋದರತ್ವದ ಸವಿ ತೋರಲೆಂದು
ಮುಳ್ಳಿನ ಕಿರೀಟ ಚಾಟಿಯೇಟು ನಿಂದೆಗಳಿಗೆ ತಲೆಬಾಗಿದ
ನೀತಿವಂತನಿಗೆ ಅವಮಾನ ತಪ್ಪಿದ್ದಲ್ಲವೆಂದು ತೋರಿಸಲು
“ನನ್ನನ್ನು ಪ್ರೀತಿಸುವೆಯಾ?” ಮೂರು ಬಾರಿ ಕೇಳಿದನು ಕ್ರಿಸ್ತ
ಪ್ರೀತಿಸುವುದು ಸುಲಭವಲ್ಲವೆಂದು ಜ್ಞಾಪಿಸಲು
ಗೊಲ್ಗೋಥಾ ಬೆಟ್ಟದ ಮೇಲೆ ಶಿಲುಬೆಗೇರಿದ ಕ್ರಿಸ್ತ
ಹುಲು ಮಾನವ ದೈವತ್ವಕ್ಕೇರಲು  !!!


Violet Pinto, Kannada Lecturer
St Mary’s PU College, Arsikere

 

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]