ಎತ್ತರಕ್ಕೇರಿ ಮೆರೆಯುವ ಮನುಜ
ಇಳಿದು ಬಾ ಕೆಳಗೆ ಅರಿಯಲು ನಿಜ
ಭ್ರಮಾಧೀನ ಲೋಕದಲ್ಲಿ ತೇಲಾಡುವ ನೀನು
ಸಾಧಿಸಿದ್ದು ಏನೆಂದು ಹೇಳುವೆಯೇನು?
ಪ್ರೀತಿ ಮರೆತೆ, ಮಮತೆ ಮರೆತೆ
ಮಾನವೀಯತೆಯನ್ನು ಗುರುತಿಸಲು ಸೋತೆ
ಹಣ ಗಳಿಸಿದೆ ಪ್ರತಿಷ್ಟೆ ಗಳಿಸಿದೆ
ಲೋಕದಲ್ಲಿ ಗಳಿಸಲು ಇನ್ನೇನಿಲ್ಲವೆಂದು ಬೀಗಿದೆ.
ಪ್ರಪಂಚದ ಬಲೆಯಿಂದ ಬಿಡಿಸಿ ಬಾ ಹೊರಗೆ
ನೋಡು ನಿನ್ನನ್ನು ಸುತ್ತುವರಿದ ಸೇಡಿನ ಹೊಗೆ
ಮನುಷ್ಯರಿಂದ ಬಯಸಲಿಲ್ಲ ನೀನು ಪ್ರೀತಿ ಸುಖ
ಹಣ ಕೀರ್ತಿ ಕೊಡುವುದು ನಿನಗೆ ಬರೇ ದು:ಖ !
ಸುಖದ ಹೊಳೆಯಲ್ಲೇ ಈಜಾಡುವ ನೀನು
ಒಳಗೊಳಗೇ ಕೊರಗುತ್ತೀಯಂತೆ ನಿಜವೇನು?
ಮನುಷ್ಯ ಜನ್ಮ ಶಾಸ್ವತವಲ್ಲ ನೋಡು
ಇನ್ನಾದರೂ ಪರಮಾತ್ಮನ ಹುಡುಕಲು ಓಡು.
ಮರವೇರಿ ಕುಳಿತ ಜಕ್ಕಾಯ ಯೇಸುವ ನೋಡಿದ
ಮದವೆಲ್ಲಾ ಇಳಿದು ಒಡನೆ ದೇವರತ್ತ ಓಡಿದ
ಕುದುರೆಯೇರಿ ಮೆರೆದ ಪೌಲ ಕೆಳಗೆ ಬಿದ್ದ
ದೇವರ ವಾಣಿಯನ್ನು ಕೇಳಿ ಮಾನಸಾಂತರ ಪಡೆದ.
ಬರಲಾರವು ಸುಖಭೋಗಗಳು ನೀ ಬಿದ್ದಾಗ
ಬಾರರು ನಿನ್ನ ಗೆಳೆಯರು ನೀ ಸೋತಾಗ
ಹಣ ಕೊಡದು ನಿನ್ನ ರೋಗಕ್ಕೆ ಉಪಶಮನ
ಪ್ರಪಂಚ ನೀಡದು ನಿನಗೆ ಜೀವದಾನ !
ನಿನ್ನಿಂದ ನೊಂದ ಹೆತ್ತವರ ಕೂಗು
ನಿನ್ನಿಂದ ಕಸಿಯಲ್ಪಟ್ಟ ಮುಗ್ಧರ ನಗು
ನಿನ್ನಿಂದ ಮುರಿದ ಮನೆಗಳ ಸೊಬಗು
ನಿನ್ನನ್ನು ಶಪಿಸುವ ಮುನ್ನ ದೇವರ ಮೊರೆ ಹೋಗು.
ನಿನ್ನನ್ನು ಹೆಸರಿಡಿದು ಕೂಗುವ ದೇವರ ಆಲಿಸು
ಇನ್ನಾದರೂ ಮನುಷ್ಯನಾಗಿ ಬಾಳಲು ತೀರ್ಮಾನಿಸು
ಸ್ವರ್ಗಲೋಕದಲ್ಲಿ ಆಸ್ತಿಯನ್ನು ಸಂಪಾದಿಸು
ಪಿತನನ್ನು ಪ್ರೀತಿಸಿ ನೀನಾಗು ಅವರ ಕೂಸು.
Violet Pinto, Lecturer
St Mary’s PU College, Arsikere